ಝೈನುಲ್ ಉಲಮಾ ಮಾಣಿ ಉಸ್ತಾದ್ ಕಿರು ಪರಿಚಯ
ಉಲಮಾಗಳು ಪ್ರವಾದಿಗಳ ಉತ್ತಾರಾಧಿಕಾರಿಗಳು" ಇದು ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರ ನುಡಿ. "ಪ್ರವಾದಿಗಳು ದೀನಾರ್ ದಿರ್ಹಂಗಳನ್ನು ಬಿಟ್ಟು ಹೋಗಿಲ್ಲ, ಅವರು ಬಿಟ್ಟು ಹೋಗಿರುವುದು ಜ್ಞಾನವನ್ನು" ಎಂದಿದ್ದಾರೆ ಅವರು. ಈ ಒಂದು ಮಾತಿನಿಂದ ಪ್ರಚೋದನೆಗೊಂಡ ಅನೇಕರು ಜ್ಞಾನ ಸಾಗರದಲ್ಲಿ ಈಜಾಡಲು ಪ್ರಯತ್ನಿಸಿದರು. ರಾತ್ರಿ ಹಗಲೆನ್ನದೆ ಜ್ಞಾನ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಬದುಕನ್ನಿಡೀ ಅದಕ್ಕಾಗಿ ಮೀಸಲಿಟ್ಟ ಹಲವಾರು ಪ್ರತಿಭೆಗಳನ್ನು ಕಾಣಬಹುದು. ಪ್ರವಾದಿಗಳ ವಾರೀಸು ಸೊತ್ತಾದ ಜ್ಞಾನವನ್ನು ಗಳಿಸಲು ಮುಂದೆ ಬಂದ ವಿದ್ವಾಂಸ ದಿಗ್ಗಜರ ಸಂಖ್ಯೆಯನ್ನು ಎಣಿಸಲಸಾಧ್ಯ. ಜ್ಞಾನ ಸಂಪಾದನೆಗಾಗಿ ಸಾವಿರಾರು ಕಿ.ಮೀಗಳಷ್ಟು ಯಾತ್ರೆ ಮಾಡಿದವರಿದ್ದಾರೆ. ಹಲವು ಕಷ್ಟ ನಷ್ಟಗಳನ್ನನುಭವಿಸಿ ಒಂದು ಹದೀಸಿನ ಶೇಖರಣೆಗಾಗಿ ತಿಂಗಳುಗಳ ಕಾಲ ಸಾಹಸಿಕ ಪ್ರಯಾಣ ಬೆಳೆಸಿದವರಿದ್ದಾರೆ. ಅದಕ್ಕಾಗಿ ಊರು ಕೇರಿಗಳನ್ನು ದಾಟಿ ಬೆಟ್ಟ ಗುಡ್ಡಗಳನ್ನು ಹಾದು ಭೋರ್ಗರೆಯುವ ಸಮುದ್ರದಲ್ಲೂ ಯಾತ್ರೆ ಮುಂದುವರಿಸಿದವರಿದ್ದಾರೆ. ಆದ್ದರಿಂದಲೇ ಇಸ್ಲಾಮಿಕ್ ಜಗತ್ತು ಜ್ಞಾನ ಸೂರ್ಯರಿಂದ ಧನ್ಯಗೊಂಡಿತು. ಜ್ಞಾನ ಸಾಮ್ರಾಜ್ಯದ ಹೆಬ್ಬಾಗಿಲುಗಳನ್ನು ದರ್ಶಿಸಲು ನಮ್ಮಿಂದ ಸಾಧ್ಯವಾಯಿತು. ಪ್ರವಾದಿ ಸ್ವಲ್ಲಲಾಹು ಅಲೈಹಿ ವಸಲ್ಲಮರ ಕಾಲದಿಂದಲೇ ವಿಜ್ಞಾನದ ಪ್ರಖರ ಬೆಳಕು ಕೇರಳ ತಲುಪಿತ್ತು. ಆ ಕಾರಣಕ್ಕಾಗಿ ಅಲ್ಲಿ ಅನೇಕಾರು ಉಲಮಾಗಳ ಜನ್ಮ ನಡೆಯಿತು. ಸ್ವಹಾಬಿಗಳ ಬಳಿಕ ಕಳೆದ ಶತಮಾನಗಳಿಂದ ಪೊನ್ನಾಣಿ ಮಕ್ದೂಮ್ಗಳಿಂದಲೂ, ಅರಬ್ ಲೋಕದಿಂದ ಬಂದ ಸಾದಾತ್ಗಳಿಂದಲೂ, ಉಮರ್ ಖಾಳಿ, ಮಂಬುರಂ ತಂಙಳ್ ಮುಂತಾದ ಸಾತ್ವಿಕರಿಂದಲೂ ಕೇರಳದ ಮಣ್ಣಲ್ಲಿ ಅರಿವಿನ ಪ್ರಭೆಯು ವ್ಯಾಪಕವಾಗಿ ಹಬ್ಬಿತು. ಅಲ್ಲಾಹನ ಮಹಾ ಅನುಗ್ರಹವೆಂಬಂತೆ ಆ ಬೆಳಕು ಕರ್ನಾಟಕದ ಕರಾವಳಿಗೂ ವ್ಯಾಪಿಸಿತು. ವಿರಳವಾದರೂ ಇಲ್ಲಿ ಅನೇಕ ವಿದ್ವಾಂಸರು ಜನ್ಮ ತಾಳಿದರು. ಇಸ್ಲಾಮೀ ಪ್ರಬೋಧನೆಯ ಸುಗಂಧವು ಇಲ್ಲಿ ಪರಿಮಳ ಬೀರತೊಡಗಿತು. ಸಾಹಸಿಕ ಲೋಕ ಸಂಚಾರಿ ಇಬ್ನುಬತೂತ ಕರ್ನಾಟಕಕ್ಕೆ ಬಂದಾಗ ಮಂಗಳೂರಿನಲ್ಲಿ ದರ್ಸ್ ಇತ್ತು ಎಂಬುವುದನ್ನು ತನ್ನ ವಿಖ್ಯಾತ ಗ್ರಂಥ ರಿಹ್ಲದಲ್ಲಿ ದಾಖಲಿಸಿದ್ದು ಇಸ್ಲಾಮೀ ಜ್ಞಾನ ಪ್ರಚಾರವು ಇಲ್ಲಿ ಪೂರ್ವ ಕಾಲದಲ್ಲೇ ನಡೆಯುತ್ತಿತ್ತು ಎಂಬುವುದನ್ನು ಸೂಚಿಸುತ್ತದೆ. ಈ ಸರಣಿಗೆ ಸೇರ್ಪಡೆಯೆಂಬಂತೆ ವರ್ಷಗಳ ಹಿಂದೆ ಕರ್ನಾಟಕದಲ್ಲೊಂದು ವಿದ್ವಾಂಸರೊಬ್ಬರ ಜನನವಾಗುತ್ತದೆ. ಅವರೇ ಹಿರಿಯ ವಿದ್ವಾಂಸರೂ ಸಾತ್ವಿಕರೂ ಆದ ಶೈಖುನಾ ಮಾಣಿ ಉಸ್ತಾದ್ ಅಥವಾ ಮಚ್ಚಂಪಾಡಿ ಉಸ್ತಾದ್ ಎಂದೇ ಜನಪ್ರಿಯರಾದ ದಾರುಲ್ ಇರ್ಶಾದ್ ವಿದ್ಯಾ ಸಂಸ್ಥೆಯ ರೂವಾರಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್. ಉಸ್ತಾದರ ಹುಟ್ಟೂರು ಬಂಟ್ವಾಳ ತಾಲೂಕಿನ ಬುಡೋಳಿ. ವಿಟ್ಲ ಪರ್ತಿಪ್ಪಾಡಿಯ ಅಬ್ದುಲ್ಲ ಮತ್ತು ವಿಟ್ಲ ಪೆರುವಾಯಿಯ ಮುಹಿಯ್ಯದ್ದೀನ್ರವರ ಪುತ್ರಿ ಆಸಿಯಮ್ಮರವರ ನಾಲ್ಕನೇ ಪುತ್ರರಾಗಿ ಉಸ್ತಾದ್ ಜನಿಸಿದ್ದು 1945ರ ಮೇ ತಿಂಗಳಲ್ಲಿ. ವಾಸ್ತವದಲ್ಲಿ ಆ ಒಂದು ಜನನ ಕರ್ನಾಟಕದ ಮಣ್ಣಿಗೆ ವರದಾನವಾಗಿತ್ತು. ನವ ಕನಸುಗಳ ಸಾಕ್ಷಾತ್ಕಾರಕ್ಕಿರುವ ಅವಕಾಶವಾಗಿತ್ತು. ಒಂದು ಶುಕ್ರವಾರವಾಗಿತ್ತು ಅವರ ಜನನ. ಅವರ ಕುಟುಂಬದ ಆಪ್ತರೂ ಸಯ್ಯಿದರೂ ಆಗಿದ್ದ ಮರ್ಹೂಂ ಪೂಕುಂಞಿ ತಂಙಳ್ ಮಗುವಿಗೆ ಅಬ್ದುಲ್ ಹಮೀದ್ ಎಂದು ಹೆಸರಿಡುವಂತೆ ಸೂಚಿಸಿ ಮಗನನ್ನು ವಿದ್ವಾಂಸನನ್ನಾಗಿ ಮಾಡಬೇಕು ಎಂದು ಹೇಳುತ್ತಾರೆ.ಮುಂದೆ ತನ್ನ ತ್ಯಾಗಪೂರಿತ ಬದುಕನ್ನು ಇಸ್ಲಾಮೀ ಅರಿವು ಸಂಪಾದನೆಗಾಗಿ ಮೀಸಲಿಟ್ಟ ಉಸ್ತಾದರು ಆ ರಂಗದಲ್ಲಿ ಜ್ವಲಿಸುವ ತಾರೆಯಾದರು. ದರ್ಸ್ ರಂಗದ ದೀರ್ಘ ಪಯಣದಲ್ಲಿ ಉಸ್ತಾದ್ ತನ್ನ ಗೋಲ್ಡನ್ ಜುಬಿಲಿ ಐವತ್ತು ವರ್ಷಗಳನ್ನು ದಾಟಿದ್ದಾರೆ. ಈ ನಡುವೆ ಅಪಾರ ಶಿಷ್ಯಂದಿರನ್ನೂ ಶಿಷ್ಯಂದಿರ ಶಿಷ್ಯಂದಿರನ್ನೂ ಗಳಿಸಿ ಧನ್ಯಗೊಂಡಿದ್ದಾರೆ. ವಯಸ್ಸು ಎಪ್ಪತ್ತು ಕಳೆದರೂ ಉಸ್ತಾದರು ವಿಶ್ರಾಂತಿ ಬಯಸಿಲ್ಲ. ದೀನೀ ಸೇವೆಯಿಂದ ಅವರು ದೂರ ನಿಂತಿಲ್ಲ. ಈಗಲೂ ಯುವಕರನ್ನು ನಾಚಿಸುವಂತೆ ಅತ್ತಿತ್ತ ಓಡಾಡುತ್ತಿದ್ದಾರೆ. ಬೃಹತ್ತಾದ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವ ಮೂಲಕ ತಮ್ಮ ಸೇವಾ ಕೇತ್ರವನ್ನು ಹೆಚ್ಚಿಸಿಕೊಂಡಿದ್ದಾರೆ. ಇಂದು ಪ್ರಸ್ತುತ ಸಂಸ್ಥೆಯು ತನ್ನ ಮುವತ್ತನೇ ವಾರ್ಷಿಕವನ್ನು ಆಚರಿಸುತ್ತಿದೆ. ಮುವತ್ತು ವರ್ಷಗಳ ಮುಂಚೆ ಕರ್ನಾ ಟಕದಲ್ಲಿ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣವು ಕನಸಿನ ವಿಚಾರವಾಗಿದ್ದಾಗ ಅದನ್ನು ಸಾಧಿಸಿ ತೋರಿಸಿದ ಕೀರ್ತಿಯು ಉಸ್ತಾದರಿಗೆ ಸಲ್ಲುತ್ತದೆ. ಆದ್ದರಿಂದಲೇ ಇಂದು ದಾರುಲ್ ಇರ್ಷಾದ್ ಸಂಸ್ಥೆಯು ಸಂಸ್ಥೆಗಳ ತಾಯಿ ಎಂದು ಕರೆಯಲ್ಪಡುತ್ತಿದೆ. ಹಲವು ತ್ಯಾಗೋಜ್ವಲ ನಡೆಯನ್ನು ಕಂಡ ಸಂಸ್ಥೆಯು ಇಂದು ಯಶಸ್ವಿಯ ತುದಿಯಲ್ಲಿ ನಿಂತಿದೆ. ಮುವತ್ತು ವರ್ಷಗಳೆಡೆಯಲ್ಲಿ ಹಲವನ್ನು ಸಾಧಿಸಿದೆ. ಸಮಾಜಕ್ಕೆ ಆಸರೆಯಾಗಿ ನಿಂತಿದೆ. ಬಡಜನರ ಕಣ್ಣೀರೊಪ್ಪುವಲ್ಲಿ ಒಂದು ಹೆಜ್ಜೆ ಮುಂದೆ ನಿಂತು ಕಾರ್ಯಾಚರಿಸುತ್ತಿದೆ. ಇವೆಲ್ಲದಕ್ಕೂ ರಾತ್ರಿ ಹಗಲೆನ್ನದೆ ದುಡಿದದ್ದು ಮಾಣಿ ಉಸ್ತಾದರ ಮಹಾನ್ ಸಾಧನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಗಾದ ಪಾಂಡಿತ್ಯವಿರುವ ಉಸ್ತಾದರು ಅದಕ್ಕೆ ತಕ್ಕ ವಿನಯವನ್ನು ತನ್ನದಾಗಿಸಿಕೊಂಡಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿರುವ ಉಸ್ತಾದರು ಹತ್ತು ಹಲವು ಸಂಘ ಸಂಸ್ಥೆಗಳ ನಿರ್ದೇಶಕರಾಗಿಯೂ, ಮಾರ್ಗದರ್ಶಕರಾಗಿಯೂ ಕಾರ್ಯಾಚರಿಸುತ್ತಿದ್ದಾರೆ. ಕಿತಾಬ್ ಗಳಲ್ಲಿ ಅವರು ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಮಾಲೆ ಮೌಲಿದ್ಗಳಲ್ಲಿ ಬರುವ ತಪ್ಪುಗಳನ್ನು ಸರಿಯಾಗಿ ತಿದ್ದಿ ಓದುವುದನ್ನು ಉಸ್ತಾದರಿಂದ ಕೇಳಿ ಕಲಿಯಬೇಕು. ಅರಬೀ ಕವಿತೆಗಳಲ್ಲಿ ಉಸ್ತಾದರಿಗೆ ಅಗಾಧ ಅರಿವಿದೆ. ಅವರಿಗೆ ಅದ್ಭುತವಾದ ಕಂಠಪಾಠ ಶಕ್ತಿಯಿದೆ. ಒಂದು ವಿಷಯದ ಬಗ್ಗೆ ಭಾಷಣಕ್ಕಿಳಿದರೆ ಯಾರೂ ಕೇಳಿರದ ಅನೇಕಾರು ವಿಸ್ಮಯ ವಿಷಯಗಳು ಅವರಿಂದ ಹೊರಬರುತ್ತದೆ. ಕಿತಾಬಿನ ವಿವಿದೆಡೆಗಳಲ್ಲಿ ಅವರು ಅಷ್ಟು ಮಾತ್ರಕ್ಕೂ ಕಣ್ಣಾಯಿಸಿದ್ದಾರೆ ಎಂಬುವುದಕ್ಕಿರುವ ಸೂಚನೆಯಿದು.ಎಲ್ಲೆಡೆಯೂ ಅವರದ್ದು ಪಾರದರ್ಶಕ ಬದುಕು.ಇಸ್ತಿಖಾಮತ್ ಅವರ ಬದುಕಿನ ಮುಖಮುದ್ರೆ. ಉಖ್ರವಿಯ್ಯಾದ ವಿದ್ವಾಂಸರಲ್ಲಿರಬೇಕಾದ ಗುಣಗಳನ್ನು ನಮಗೆ ಉಸ್ತಾದರ ಬದುಕನ್ನು ಅಧ್ಯಯನ ಮಾಡಿದಲ್ಲಿ ದರ್ಶಿಸಬಹುದು. ಲೇಖನ :. ಮಚಾರ್ ಸಅದಿClick Me to Share on Whatsapp