Kuwaith
Click Me to Share on Whatsappತಿರುವನಂತಪುರ, ಮಾ. 7: ಕೊರೊನಾ ರೋಗ ಭೀತಿ ಹಿನ್ನೆಲೆಯಲ್ಲಿ ಕುವೈತ್ ನ ಆರೋಗ್ಯ ಪ್ರಾಧಿಕಾರ ಭಾರತ ಸೇರಿದಂತೆ 7 ರಾಷ್ಟ್ರಗಳಿಗೆ ಇದ್ದಕ್ಕಿದ್ದಂತೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದ ಕುವೈತ್ ಗೆ ತೆರಳಬೇಕಾಗಿದ್ದ ಸುಮಾರು 170 ಪ್ರಯಾಣಿಕರು ಕೋಝಿಕ್ಕೋಡ್‌ನ ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಪರದಾಡುವಂತಾಯಿತು.
ಕುವೈತ್ ತೆರಳಲಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಅಬುಧಾಬಿ ಮೂಲಕ ಕುಬೈತ್‌ಗೆ ತೆರಳಲಿದ್ದ ಎತಿಹಾದ್ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಅವರಿಗೆ ಈ ಮಾಹಿತಿ ತಿಳಿಯಿತು.
ಕುವೈತ್ ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕರಿಂದ ತಾವು ಸುತ್ತೋಲೆ ಸ್ವೀಕರಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ನೀಡದೆ ಕೊನೆ ಕ್ಷಣದಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ವಿಮಾನ ನಿಲ್ದಾಣದಲ್ಲಿ ಕೋಝಿಕ್ಕೋಡ್, ಕಣ್ಣೂರು, ಪಾಲಕ್ಕಾಡ್ ಹಾಗೂ ಮಲಪ್ಪುರಂನ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಈ ನಿರ್ಬಂಧ ಶನಿವಾರದಿಂದ ಆರಂಭವಾಗಿ ಒಂದು ವಾರಗಳ ಕಾಲ ಇರಲಿದೆ. ಭಾರತ ಅಲ್ಲದೆ, ಫಿಲಿಪ್ಪೈನ್, ಬಾಂಗ್ಲಾದೇಶ, ಶ್ರೀಲಂಕಾ, ಈಜಿಪ್ಟ್, ಸಿರಿಯಾ ಹಾಗೂ ಲೆಬೆನಾನ್‌ನಿಂದ ಕುವೈತ್‌ಗೆ ಹಾರಾಟ ನಡೆಸುವ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗುತ್ತದೆ.