UAE
Click Me to Share on Whatsapp*ಯುಎಯಿಂದ ಕರ್ನಾಟಕಕ್ಕೆ ತುರ್ತು ವಿಮಾನವಿಲ್ಲ
ಕೇಂದ್ರದ ಧೋರಣೆ ವಿಷಾದನೀಯ: ಕೆಸಿಎಫ್
ದುಬೈ: ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರಕಾರ ತುರ್ತಾಗಿ ವಿಮಾನ ಹಾಗೂ ಜಲಮಾರ್ಗದ ವ್ಯವಸ್ಥೆ ಮಾಡಿರುವುದರ ಕುರಿತು ಅಧಿಸೂಚನೆ ಹೊರಡಿಸಿದ್ದು, ಈ ಸಂಬಂಧ ಕರ್ನಾಟಕವನ್ನು ನಿರ್ಲಕ್ಷಿಸಿರುವುದಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಲಕ್ಷಾಂತರ ಕನ್ನಡಿಗರು ಗಲ್ಫ್‍ನ ವಿವಿಧ ಭಾಗಗಳಲ್ಲಿ ಉದ್ಯೋಗದಲ್ಲಿದ್ದು, ಪ್ರಥಮ ಹಂತದ ಪ್ರಯಾಣದಲ್ಲಿ ಈ ರಾಷ್ಟ್ರಗಳ ಹೆಸರುಗಳನ್ನೇ ಕೈಬಿಟ್ಟಿರುವುದು ಅಚ್ಚರಿ ತರಿಸಿದೆ ಎಂದು ಸಂಘಟನೆ ಪ್ರಕಟನೆಯಲ್ಲಿ ತಿಳಿಸಿದೆ.
ರಾಜ್ಯದ ವರಮಾನದ ಮೂಲವಾಗಿರುವ ಗಲ್ಪ್ ಕನ್ನಡಿಗರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ವಿಚಾರದಲ್ಲಿ ಕೇಂದ್ರ ಸರಕಾರ ತೋರಿದ ನಿರಾಸಕ್ತಿ ಖೇದಕರ ಎಂದು ಸಂಘಟನೆ ಅಭಿಪ್ರಾಯಿಸಿದ್ದು, ಕೇಂದ್ರ ಸರಕಾರದ ಜೊತೆ ತಮಗಾದ ಅನ್ಯಾಯವನ್ನು ವ್ಯಕ್ತಪಡಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
ಕೋವಿಡ್ ಕಾರಣ ತೊಂದರೆಗೊಳಗಾದ ಕನ್ನಡಿಗರಿಗೆ ಊಟ,ದಿನಸಿ ಕಿಟ್, ಆಸ್ಪತ್ರೆಗೆ ಸಾಗಿಸುವುದು ಸೇರಿದಂತೆ ಹಲವು ರೀತಿಯಲ್ಲಿ ಕೆಸಿಎಫ್ ಸಹಾಯ ಹಸ್ತ ಚಾಚುತ್ತಿದೆ.
ಅಗತ್ಯವಿರುವ ಕನ್ನಡಿಗರನ್ನು ತುರ್ತಾಗಿ ಸ್ವದೇಶಕ್ಕೆ ಸಾಗಿಸುವ ವ್ಯವಸ್ಥೆ ಮಾಡುವಂತೆ ಮೊತ್ತ ಮೊದಲಾಗಿ ಸಂಘಟನೆ ವತಿಯಿಂದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಇದರ ಬಳಿಕ ಈ ಬಗ್ಗೆ ಪದೇ ಸರಕಾರವನ್ನು ಒತ್ತಾಯಿಸುತ್ತಲೇ ಬರಲಾಗಿದೆ. ಅದಾಗ್ಯೂ ಅನಿವಾಸಿ ಕನ್ನಡಿಗರು ಮಾಡಿಕೊಂಡ ಮನವಿಗೆ ಸರಕಾರವು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಕೆಸಿಎಫ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ನೂರಾರು ಮಂದಿ ಗರ್ಭಿಣಿಯರು, ರೋಗಿಗಳು, ವಿಸಿಟಿಂಗ್ ವೀಸಾದಲ್ಲಿ ಬಂದು ಕೆಲಸವಿಲ್ಲದೆ ಸಿಕ್ಕಿಹಾಕಿಕೊಂಡಿರುವವರು ಇಲ್ಲಿ ಅತಂತ್ರರಾಗಿದ್ದಾರೆ. ಅಂತವರನ್ನು ರಾಜ್ಯಗಳ ಭೇದವಿಲ್ಲದೆ ತುರ್ತಾಗಿ ಸ್ವದೇಶಕ್ಕೆ ಕರೆತರುವಲ್ಲಿ ಶ್ರಮಿಸುವುದು ಆಯಾ ದೇಶಗಳ ಕರ್ತವ್ಯವ್ಯವಾಗಿದ್ದು, ಈ ಬಗ್ಗೆ ನಮ್ಮ ರಾಜ್ಯವನ್ನು ನಿರ್ಲಕ್ಷಿಸಿರುವುದಕ್ಕೆ ಕೇಂದ್ರ ಸರಕಾರದೊಂದಿಗೆ ಅಸಮಾಧಾನವನ್ನು ವ್ಯಕ್ತಪಡಿಸಬೇಕು. ತನ್ಮೂಲಕ ಹೊರಡಿಸಿರುವ ಅಧಿಸೂಚನೆಯನ್ನುಪುನರ್‍ಪರಿಶೀಲನೆ ಮಾಡಿ ಯುಎಇ ಸೇರಿದಂತೆ ಗಲ್ಫ್ ಕನ್ನಡಿಗರನ್ನೂ ಇದರಲ್ಲಿ ಸೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಮುಖ್ಯಮಂತ್ರಿ .ಎಸ್.ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.
ಸುಮಾರು 3 ಲಕ್ಷದಷ್ಟು ಕನ್ನಡಿಗರು ಯುಎಇಯಲ್ಲಿ ಉದ್ಯೋಗದಲ್ಲಿದ್ದು, ಅವರನ್ನು ಸುರಕ್ಷಿತವಾಗಿ ಊರಿಗೆ ಸಾಗಿಸುವ ಕುರಿತು ರಾಜ್ಯ ಸರಕಾರ ಗಮನ ಹರಿಸಬೇಕು. ಕೆಲವೇ ಸಂಖ್ಯೆಯ ಗಲ್ಫ್ ಪ್ರವಾಸಿಗಳಿರುವ ರಾಜ್ಯಗಳಿಗೆ ವಿಮಾನದ ವ್ಯವಸ್ಥೆಯನ್ನು ಮಾಡಿರುವ ಕೇಂದ್ರ ಅತೀ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಕರ್ನಾಟಕವನ್ನು ನಿರ್ಲಕ್ಷಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ತಕ್ಷಣವೇ ಕೇಂದ್ರದೊಂದಿಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ*