uae
Click Me to Share on Whatsappಕೆಸಿಎಫ್ ಯುಎಇ ಅಧ್ಯಕ್ಷರ ಈದ್ ಉಲ್ ಅಲ್ಹಾ ಸಂದೇಶ
ಬಹು: ಅಬ್ದುಲ್ ಜಲೀಲ್ ನಿಝಾಮಿ
ಅಧ್ಯಕ್ಷರು ಕೆಸಿಎಫ್ ಯುಎಇPublishing by: Media & Publishing KCF UAE
ಇಬ್ರಾಹೀಂ ನಬಿ (ಅ) ತ್ಯಾಗೋಜ್ವಲ ಜೀವನದ ಸಂದೇಶಗಳು ನಮ್ಮ ಬದುಕಿಗೆ ಮಾದರಿಯಾಗಬೇಕು. ತನ್ನ ಕರುಳ ಕುಡಿ ಇಸ್ಮಾಯಿಲ್ ನೆಬಿ (ಅ) ರವರನ್ನು ಬಲಿ ನೀಡಬೇಕೆಂಬ ಸೃಷ್ಟಿಕರ್ತನ ಆಜ್ಞೆಗೆ ಶಿರಬಾಗಿ ಬಲಿದಾನಕ್ಕೆ ಸಿದ್ದರಾದಾಗ ಅಲ್ಲಾಹು ನೀಡಿದ ಔದಾರ್ಯ ನಮ್ಮ ಇಂದಿನ ಸ್ಥಿತಿಗತಿಗೆ ಬಲುದೊಡ್ಡ ಪಾಠವಾಗಿದೆ. ಯಾವುದೇ ಸಂದ್ವಿಗ್ಧ ಪರಿಸ್ಥಿತಿಯಲ್ಲೂ ಧೃತಿಗೆಡದೆ ಅಲ್ಲಾಹನ ಪರೀಕ್ಷೆಗೆ ಶಿರಬಾಗಿ ತಾಳ್ಮೆಯಿಂದ ಎದುರಿಸಿದರೆ ಯಶಸ್ಸು ಖಂಡಿತ. ಅದರ ಸ್ಪಷ್ಟ ಉದಾಹರಣೆಯಾಗಿ, ಶತ್ರುಗಳು ಇಬ್ರಾಹೀಂ ನೆಬಿ (ಅ) ರವರನ್ನು ಜ್ವಾಲೆಯಾಗಿ ಹೊರಹೊಮ್ಮುತ್ತಿರುವ ಬಿಸಿಯೇರಿದ ಆಳವಾದ ಆಗ್ನಿ ಕುಂಡಕ್ಕೆ ಎಸೆದ ಸಂದರ್ಭ ಮತ್ತು ನಂತರ ತನ್ನ ಕರುಳ ಕುಡಿಯನ್ನು ಬಲಿ ನೀಡಲು ತಯ್ಯಾರಾದ ಎರಡು ಸಂದರ್ಭಗಳು. ಈ ಎರಡು ಸಂದರ್ಭಗಳಲ್ಲೂ ಅವರ ಮನೋಸ್ಥೈರ್ಯ ಮತ್ತು ಸೃಷ್ಟಿಕರ್ತನಲ್ಲಿ ಇಟ್ಟಿರುವ ಅಚಲವಾದ ನಂಬಿಕೆಯೇ ಅವರನ್ನು ರಕ್ಷಣೆ ಮಾಡಿತು.
ಕೋವಿಡ್ ಮಹಾಮಾರಿ ಇಂದು ವಿಶ್ವದಾದ್ಯಂತ ಅತೀ ಭಯಾನಕ ವೈರಸ್ ಆಗಿ ಜನಜೀವನವನ್ನು ಬಲಿತೆಗೆದುಕೊಂಡಿದೆ. ಲಕ್ಷಗಟ್ಟಲೆ ಜೀವಗಳು ಬಲಿಯಾಗಿದೆ. ಕೋಟ್ಯಾಂತರ ಜನರು ಸೋಂಕು ಭಾದಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಗಳು ಅನಾಥವಾಯಿದೆ. ವ್ಯಾಪಾರ ವಹಿವಾಟುಗಳು ಪಾತಾಳ ಸೇರಿಕೊಂಡಿದೆ. ಜನರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಒಂದು ಹೊತ್ತಿನ ಅನ್ನಕ್ಕೂ ಪರದಾಡುವಂತಹ ಸ್ಥಿತಿಗೆ ದೇಶದ ಅರ್ಥಿಕತೆ ಹದಗೆಟ್ಟು ಹೋಗಿದೆ. ಪರಸ್ಪರ ಭಯ ಆವರಿಸಿಕೊಂಡಿದೆ.
ಇಂತಹ ಅತೀ ಭಯಾನಕ ಸನ್ನೀವೇಶದಲ್ಲಿ ಅಲ್ಲಾಹನ ಮೇಲಿಟ್ಟಿರುವ ನಂಬಿಕೆಯಿಂದ ನಾವು ಹಿಂಜರಿಯಬಾರದು. ಪರೀಕ್ಷೆಗಳು ಎದುರಾದಾಗ ಸಂಯಮ ಕಳೆದುಕೊಳ್ಳಬಾರದು. ಇಸ್ಲಾಮಿನ ಚರಿತ್ರೆಯಲ್ಲಿ ಪೂರ್ವಿಕ ಮಹಾನರ ಬದುಕಿನ ಪುಟಗಳನ್ನು ತೆರೆದು ನೋಡಿದರೆ ಸಮಸ್ಯೆಗಳನ್ನು ಎದುರಿಸಿ ಯಶಸ್ಸು ಸಾಧಿಸಿದ ಉದಾಹರಣೆಗಳೇ ಕಾಣಲು ಸಾಧ್ಯ. ಒಂದು ಪ್ರಪಂಚ ನಮ್ಮಿಂದ ವಿರಮಿಸುವಾಗ ಇನ್ನೊಂದು ಪ್ರಪಂಚ ತೆರೆದುಕೊಳ್ಳುತ್ತದೆ. ಅದರಲ್ಲಿ ವಿಭಿನ್ನ ರೀತಿಯ ಉತ್ತಮ ಅವಕಾಶಗಳ ಬಾಗಿಲು ತೆರೆದಿರುತ್ತದೆ. ಅಲ್ಲಾಹನ ಎಲ್ಲಾ ಪರೀಕ್ಷೆಗಳಲ್ಲೂ ಸಂಯಮ ಕಳೆದುಕೊಳ್ಳದಂತೆ ಆರಾಧನೆಗಳನ್ನು ಹೆಚ್ಚಿಸುವ ಬಗ್ಗೆ ನಾವು ಗಮನಹರಿಸಬೇಕು. ಲಾಕ್ ಡೌನ್ ನಿಂದ ಸಿಕ್ಕಿದ ಬಿಡುವಿನ ಸಮಯಗಳನ್ನು ಸಾಮಾಜ ಸೇವೆ ಹಾಗೂ ಇನ್ನಿತರ ಒಳಿತಿನ ಹಾದಿಯಲ್ಲಿ ವಿನಿಯೋಗಿಸಬೇಕು. ಅಲ್ಲಾಹು ಅನುಗ್ರಹಿಸಲಿ ಆಮೀನ್
ಕೆಸಿಎಫ್ ಯುಎಇ ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಹಲವಾರು ಅನಿವಾಸಿ ಕನ್ನಡಿಗರಿಗೆ ಹಲವು ರೀತಿಯಲ್ಲಿ ಸಹಾಯ ಸಹಕಾರಗಳ ಹಸ್ತವನ್ನು ನೀಡಿ ಅನಿವಾಸಿ ಕನ್ನಡಿಗರ ಭರವಸೆಯ ಸಂಘಟನೆಯಾಗಿ ರೂಪುಗೊಂಡಿದೆ. ವಿಮಾನಯಾನ ಸ್ಥಗಿತಗೊಂಡು ತಾಯ್ನಾಡಿಗೆ ತಲುಪಲು ಅಸಾಧ್ಯವಾಗಿರು ಅನಿವಾಸಿ ಕನ್ನಡಿಗರನ್ನು ಕೆಸಿಎಫ್ ಯಾತ್ರ ಭಾರತ್ ವಿಶೇಷ ಯೋಜನೆಯ ಮೂಲಕ ಆರು ಚಾರ್ಟರ್ ವಿಮಾನಗಳ ಮೂಲಕ ಸಾವಿರದಷ್ಟು ಕನ್ನಡಿಗರನ್ನು ತಾಯ್ನಾಡಿಗೆ ತಲುಪಿಸಿ ಅತ್ಯಂತ ಭರವಸೆಯ ಯಾತ್ರಯಾಗಿ ಗುರುತಿಸಿಕೊಂಡಿದೆ.
ಕೆಸಿಎಫ್ ಯುಎಇ ಯ ಈ ಸಾಮಾಜ ಸೇವೆಯಲ್ಲಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ನಾಯಕರು, ಕಾರ್ಯಕರ್ತರು ಹಾಗೂ ತನು,ಮನ,ಧನ ಗಳಿಂದ ಸಹಾಯವನ್ನು ನೀಡಿ ಪ್ರೋತ್ಸಾಹಿತ್ತಿರುವ ದಾನಿಗಳಿಗೆ, ಉದ್ಯಮಿಗಳಿಗೆ ಹಾಗೂ ಹಿತೈಷಿಗಳಿಗೆ ಅಲ್ಲಾಹು ಸಂಪೂರ್ಣ ಬರಕತ್ ಕರುಣಿಸಲಿ ಆಮೀನ್.
ಸರ್ವರಿಗೂ ಈದ್ ಉಲ್ ಅಲ್ಹಾ ಮುಬಾರಕ್