ಶಾಹೀನ್ ಬಾಘ್
ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣೆಯ ನಂತರ ಶಾಹೀನ್ ಬಾಘ್ ಪ್ರತಿಭಟನಾಕಾರರ ವಿರುದ್ಧದ ಅರ್ಜಿಗಳ ವಿಚಾರಣೆ ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ರಾಷ್ಟ್ರರಾಜಧಾನಿಯಲ್ಲಿ ಶನಿವಾರ ಚುನಾವಣೆ ನಡೆಯಲಿದ್ದು, ಅದರ ಮೇಲೆ ಈ ಪ್ರಕರಣದ ವಿಚಾರಣೆ ಪ್ರಭಾವ ಬೀರುವುದು ಬೇಡ ಎಂಬ ಕಾರಣಕ್ಕೆ ವಿಚಾರಣೆಯನ್ನು ಚುನಾವಣೆ ನಂತರ ಮುಂದುವರಿಸುವುದಾಗಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ. ಶಾಹೀನ್ ಬಾಘ್ನಲ್ಲಿನ ಸಿಎಎ ವಿರೋಧಿ ಪ್ರತಿಭಟನೆ ವಿರುದ್ಧ ಬಹಳ ಅರ್ಜಿಗಳು ದಾಖಲಾಗಿದ್ದು, ಅವುಗಳ ವಿಚಾರಣೆ ಈಗ ನಡೆಸಿದರೆ ಅದು ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂಬ ಅಂಶವನ್ನು ಅರ್ಜಿದಾರರ ಪೈಕಿ ಒಬ್ಬರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾವೂ ಇದನ್ನೇ ಹೇಳುವವರಿದ್ದೆವು. ಸೋಮವಾರ ವಿಚಾರಣೆ ಮುಂದುವರಿಸುತ್ತೇವೆ ಎಂಬ ನಿರ್ಣಯಕ್ಕೆ ಬರಲು ಇದುವೇ ಕಾರಣ. ನಾವೇಕೆ ಚುನಾವಣೆ ಮೇಲೆ ಪ್ರಭಾವ ಬೀರಬೇಕು ಎಂದು ಮರುಪ್ರಶ್ನಿಸಿದರು. ಇದೇ ವೇಳೆ, ನ್ಯಾಯವಾದಿ ಅಮಿತ್ ಸಾಹ್ನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇದ್ದು, ಡಿಸೆಂಬರ್ 15ರಿಂದ ಶಾಹೀನ್ ಬಾಘ್ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಕಾಲಿಂದಿ ಕುಂಜ್-ಶಾಹೀನ್ ಬಾಘ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ದೆಹಲಿ ಪೊಲೀಸರಿಗೆ ಸೂಚನೆ ಕೊಡಬೇಕು ಎಂಬ ಅಂಶದ ಬಗ್ಗೆ ಅವರು ಕೋರ್ಟ್ ಗಮನ ಸೆಳೆದಿದ್ದಾರೆ. ಇದರ ನ್ಯಾಯತೀರ್ಮಾನವೂ ಬಾಕಿ ಇದೆ.Click Me to Share on Whatsapp